Skip Ribbon Commands
Skip to main content

                                       Windows 7                                                      

ವಿಂಡೋಸ್ 7  ಅಂದರೇನು...

 

ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಕೆಗೆಂದು ಮೈಕ್ರೋಸಾಫ್ಟ್ ನಿರ್ಮಿಸಿದ ಕಾರ್ಯಾಚರಣಾ ವ್ಯವಸ್ಥೆಗಳ ಸರಣಿಯಲ್ಲಿ 'ವಿಂಡೋಸ್ 7' ಆವೃತ್ತಿ ಒಂದಾಗಿದೆ. ಡೆಸ್ಕ್ಟಾಪ್, ಲ್ಯಾಪ್ಟಾಪ್, ನೋಟ್ಬುಕ್, ಟ್ಯಾಬ್ಲೆಟ್ ಪರ್ಸನಲ್ ಕಂಪ್ಯೂಟರ್, ಮಾಧ್ಯಮ ಕೇಂದ್ರ ಪರ್ಸನಲ್ ಕಂಪ್ಯೂಟರ್ಗಳಲ್ಲಿಯೂ ಇವುಗಳ ಬಳಕೆ ಇದೆ.

 

2009ರ ಜುಲೈ 22ರಂದು ವಿಂಡೋಸ್ 7 ಬಿಡುಗಡೆಯಾಯಿತು. ಅದೇ ವರ್ಷದ ಅಕ್ಟೋಬರ್ 22ರಂದು ಇದು ರಖಂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಯಿತು. ಇದರ ಪೂರ್ವದ ತಂತ್ರಾಂಶ 'ವಿಂಡೋಸ್ ವಿಸ್ತಾ' ಬಿಡುಗಡೆಯಾದ ಮೂರೂವರೆ ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ವಿಂಡೋಸ್ 7 ಬಂತು. ವಿಂಡೋಸ್ 7ನ ಸರ್ವರ್ ಭಾಗವಾಗಿ ವಿಂಡೋಸ್ ಸರ್ವರ್ 2008, R2 ಸಹ ಇದೇ ಅವಧಿಯಲ್ಲಿ ಮಾರುಕಟ್ಟೆಗೆ ಬಂದಿತು.
 

ವಿಂಡೋಸ್ 7 ವಿಂಡೋಸ್ ಸರಣಿಯ ವಿಸ್ತರಿತ ತಂತ್ರಾಂಶ. ವಿಂಡೋಸ್ ವಿಸ್ತಾ ಕಾರ್ಯಾಚರಿಸುವ ಹಾರ್ಡ್ವೇರ್ ಮತ್ತು ಅಪ್ಲಿಕೇಶನ್ಗಳಲ್ಲಿ ವಿಂಡೋಸ್ 7 ಕೂಡಾ ಬಳಕೆಯಾಗುವಂತೆ ಇದನ್ನು ರೂಪಿಸಲಾಗಿದೆ.

 

ವಿಂಡೋಸ್ನಿ ಈ ಆವೃತ್ತಿಗೆ ಮೊದಲಿದ್ದ ಹೆಸರು ಬ್ಲಾಕ್ ಕೂಂಬ್ (ಕಪ್ಪು ಹಣಿಗೆ). ವಿಸ್ಲರ್ ಸಂಕೇತ ಭಾಷೆಯ ವಿಂಡೋಸ್ ಎಕ್ಸ್ಪಿಯ ಮುಂದುವರಿಕೆಯಾಗಿ ಇದನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿತ್ತು. ಆಧುನಿಕ ದಾಸ್ತಾನು ವ್ಯವಸ್ಥೆಯಲ್ಲಿ ಶೋಧ ಮತ್ತು ವಿಚಾರಣೆಗೆ ಒತ್ತು ನೀಡಿ ಇದನ್ನು ರೂಪಿಸಲು ಉದ್ಧೇಶಿಸಲಾಗಿತ್ತು. ಆದರೆ ಮಧ್ಯಂತರದಲ್ಲಿ ಲಾಂಗ್ ಹಾರ್ನ್ ಸಂಕೇತ ಭಾಷೆಯಲ್ಲಿ ಅಲ್ಪ ಮಟ್ಟದಲ್ಲಿ ಈ ತಂತ್ರಾಂಶದ ಬಿಡುಗಡೆಯನ್ನು ಘೋಷಿಸಲಾಯಿತು. ಇದರಿಂದ ಬ್ಲ್ಯಾಕ್ ಕೂಂಬ್ನ ಅಭಿವೃದ್ದಿ ಕೊಂಚ ನಿಧಾನಗತಿಗೆ ಸರಿಯಿತು.

 

ಈ ಲಾಂಗ್ ಹಾರ್ನ್ ಬಳಿಕ ವಿಂಡೋಸ್ ವಿಸ್ತಾ ಆಯಿತು. ಬ್ಲ್ಯಾಕ್ ಕೂಂಬನ್ನು 2006ರ ಆದಿಯಲ್ಲಿ ವಿಯೆನ್ನಾ ಎಂದು  ಮರುನಾಮಕರಣ ಮಾಡಲಾಯಿತು. 2007ರಲ್ಲಿ ವಿಂಡೋಸ್ 7 ಎಂದು ಮತ್ತೆ ಬದಲಿಸಲಾಯಿತು. 2008ರಲ್ಲಿ ಕಾರ್ಯಾಚರಣೆ ವ್ಯವಸ್ಥೆಗೆ ವಿಂಡೋಸ್ 7 ಅಧಿಕೃತ ಹೆಸರು ಎಂಬುದಾಗಿ ಘೋಷಿಸಲಾಯಿತು.

 

2008ರ ಜನವರಿಯಲ್ಲಿ ಮೈಕ್ರೋಸಾಫ್ಟ್ ಮೊದಲ ಬಾರಿಗೆ ಇದನ್ನು ಬಾಹ್ಯ ಜಗತ್ತಿಗೆ ಬಿಡುಗಡೆ ಮಾಡಿತು. ತಾನು ಪುನರ್ರೂಪಿಸಿದ ಟಾಸ್ಕ್ ಬಾರ್ ಜತೆಗೆ ಇದರ ಪ್ರಾತ್ಯಕ್ಷಿಕೆ ನೀಡಿತು. 2008ರ ಡಿಸೆಂಬರ್ 27ರಂದು ವಿಂಡೋಸ್ 7 ಬೀಟಾ ಇಂಟರ್ನೆಟ್ನಲ್ಲಿ ಲಭ್ಯವಾಯಿತು. ಕಾರ್ಯಾಚರಣಾ ಪ್ರಯೋಗದಲ್ಲಿ ವಿಂಡೋಸ್ 7 ಬೀಟಾವು ವಿಂಡೋಸ್ ಎಕ್ಸ್ಪಿ ಮತ್ತು ವಿಸ್ತಾಗಳನ್ನು ಮೀರಿಸಿತು. ಬೂಟ್ ಅವಧಿ, ಶಟ್ಡೌನ್ ಅವಧಿ ಕಡತಗಳಲ್ಲಿ ಕಾರ್ಯಾಚರಿಸುವ ಅವಧಿಗೆ ಸಂಬಂಧಿಸಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಇದರ ಸಾಧನೆ ಅಮೋಘವಾಗಿತ್ತು. ಆದರೆ ವೀಡಿಯೋ ಸಂಕಲನ ಕಚೇರಿ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇದರ ಕಾರ್ಯವು ಎಕ್ಸ್ಪಿ ಮತ್ತು ವಿಂಡೋಸ್ ವಿಸ್ತಾಗಳನ್ನು ಮೀರಿಸುವಂತಿರಲಿಲ್ಲ.

 

2009ರ ಜನವರಿ 7ರಂದು 64 ಬಿಟ್ ಆವೃತ್ತಿಯ ವಿಂಡೋಸ್ 7 ಬೀಟಾ ವೆಬ್ಗಳಲ್ಲಿ ದೊರೆಯಲಾರಂಭಿಸಿತು. ಐಎಸ್ಒ ಇಮೇಜ್ ಮಾದರಿಯಲ್ಲಿ ಎಂಎಸ್ಡಿಎನ್ ಮತ್ತು ಟೆಕ್ನೆಟ್ ಚಂದಾದಾರರಿಗೆ ವಿಂಡೋಸ್ 7 ಬೀಟಾ ತಂತ್ರಾಂಶ ಡೌನ್ಲೋಡ್ಗೆ ಲಭ್ಯ ಎಂದು ಮೈಕ್ರೋಸಾಫ್ಟ್ ಸಿಇಓ ಸ್ಟೀವ್ ಬುಲ್ಮೆನ್ ಘೋಷಿಸಿದರು.

ವಿಂಡೋಸ್ನ ಈ ಆವೃತ್ತಿ ಹೆಚ್ಚು ಬಳಕೆದಾರ ಕೇಂದ್ರಿತ ಕಾರ್ಯಸಾಧನೆಯಲ್ಲಿ ಸುಧಾರಣೆಗೆ ವಿಂಡೋಸ್ 7 ಹೆಚ್ಚು ಆದ್ಯತೆ ನೀಡಿದೆ ಎಂಬುದಾಗಿ ನ್ಯೂಸ್ ವೀಕ್ಗೆ ನೀಡಿದ ಸಂದರ್ಶನದಲ್ಲಿ ಬಿಲ್ ಗೇಟ್ಸ್ ಹೇಳುತ್ತಾರೆ.

ವಿಂಡೋಸ್ 7 ಹಲವು ಹೊಸ ಆವಿಷ್ಕಾರಗಳನ್ನು ಒಳಗೊಂಡಿದೆ. ಸ್ಪರ್ಷ ಮತ್ತು ಕೈಬರಹ ಗುರುತಿಸುವಿಕೆಯಲ್ಲಿ ಸುಧಾರಣೆಗಳಾಗಿವೆ. ಗ್ರಾಫಿಕ್ ಕಾರ್ಡ್ಗಳಿಗೂ ಇದು ಬೆಂಬಲ ಒದಗಿಸುತ್ತದೆ. ನಿಯಂತ್ರಣ ಪ್ಯಾನಲ್ನಲ್ಲಿ ಕ್ಲಿಯರ್ಟೈಪ್ ಟೆಕ್ಸ್ಟ್ ಟ್ಯೂನರ್, ಬಯೋಮೆಟ್ರಿಕ್ ಉಪಕರಣಗಳು ಬಂದಿವೆ.

 

ಮೊದಲಿನ ಆವೃತ್ತಿಗಳಲ್ಲಿ ವಿಂಡೋಸ್ ಹೆಲ್ತ್ ಸೆಂಟರ್ ಮತ್ತು ವಿಂಡೋಸ್ ಸೊಲ್ಯೂಶನ್ ಸೆಂಟರ್ ಎಂದು ಇದ್ದ ವಿಂಡೋಸ್ ಆರೋಗ್ಯ ಕೇಂದ್ರ ಹಾಗೂ ಸಮಸ್ಯೆ ಪರಿಹಾರ ಕೇಂದ್ರಗಳ ಹೆಸರುಗಳು ವಿಂಡೋಸ್ ಆಕ್ಷನ್ ಸೆಂಟರ್ ಎಂದು ಬದಲಾಗಿದೆ. ಇದು ಕಂಪ್ಯೂಟರ್ನ ಭದ್ರತೆ ಮತ್ತು ನಿರ್ವಹಣೆಯನ್ನು ಮಾಡುತ್ತದೆ.

 

ಟಾಸ್ಕ್ ಬಾರ್ ಈ ತಂತ್ರಾಂಶದಿಂದ ಬಹುಮುಖ್ಯ ದೃಶ್ಚಿಕ ಬದಲಾವಣೆಯಾಗಿದೆ. ಇಲ್ಲಿ ಟೂಲ್ಬಾರ್ ಅನ್ನು ಬದಲಾಯಿಸಲಾಗಿಗೆ. ವಿಂಡೋಸನ್ನು ಕಂಪ್ಯೂಟರ್ ಪರದೆಯ ಎಡಬಲ ಮೂಲೆಗಳಿಗೆ ತಳ್ಳುವ ಸಾಧ್ಯತೆಯಿಂದಾಗಿ ಬಳಕೆದಾರರಿಗೆ ದಾಖಲೆಗಳನ್ನು, ವಿವರಗಳನ್ನು, ಕಡತಗಳನ್ನು ತಾಳೆಹಾಕಿ ನೋಡುವ ಅವಕಾಶವಿದೆ.

 

ವಿಂಡೋಸ್ 7 ಆರು ಪ್ರತ್ಯೇಕ ವಿಭಾಗಗಳಲ್ಲಿ ಲಭ್ಯವಿದೆ. ಮೈಕ್ರೋಸಾಫ್ಟ್ ಈ ತಂತ್ರಾಶವನ್ನು ನಿಮ್ಮ ಕಂಪ್ಯೂಟರನ್ನು ಸರಳಗೊಳಿಸಿ ಎಂಬ ಘೋಷವಾಕ್ಯದಡಿ ಮಾರುಕಟ್ಟೆ ಮಾಡುತ್ತಿದೆ. ಬೇರೆಬೇರೆ ವ್ಯಕ್ತಿಗಳು, ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ವಿಂಡೋಸ್ 7ನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಸ್ಟಾರ್ಟರ್ ಹೋಂ ಬೇಸಿಕ್, ಹೋಂ ಪ್ರೀಮಿಯಂ, ಪ್ರೊಫೆಶನಲ್, ಎಂಟರ್ಪ್ರೈಸ್, ಅಲ್ಟಿಮೇಟ್ ಹೀಗೆ ಆರು ಮಾದರಿಗಳಲ್ಲಿ ಬಿಡುಗಡೆಯಾಗಿರುವ ವಿಂಡೋಸ್ 7ನ ಆರಂಭಿಕ ಮಾದರಿ ನೋಟ್ಬುಕ್ಗಳಿಗೆ, ಹೋಂ ಬೇಸಿಕ್ ಅಭಿವೃದ್ಧಿ ಸಂಸ್ಥೆಗಳಿಗೆ ಉಪಯುಕ್ತ. ಎಂಟರ್ಪ್ರೈಸ್ ಮಾದರಿಯು ಕಾರ್ಪೋರೆಟ್ ಉದ್ಯಮ ಸಂಸ್ಥೆಗಳಿಗೆ ಉಪಯುಕ್ತ. ಹೋಂ ಪ್ರೀಮಿಯಂ ಸಾಮಾನ್ಯ ಗೃಹ ಬಳಕೆದಾರರಿಗೆ ಸೂಕ್ತವಾಗಿದೆ.

 

ವಿಂಡೋಸ್ 7 ಕಡತಗಳ ಹುಡುಕಾಟವನ್ನು ಸರಳವಾಗಿಸಿದೆ. ಕಡಿಮೆ ಶ್ರಮದಲ್ಲಿ ಅಂಕಿ-ಅಂಶ ವಿವರಗಳನ್ನು ದಾಸ್ತಾನು ಮಾಡಬಹುದು. ಮೌಸ್ ಬದಲಿಗೆ ಟಚ್ ಸ್ಕ್ರೀನ್(ಪರದೆ ಸ್ಪರ್ಷ)  ಮೂಲಕ ಕಾರ್ಯಾಚರಿಸಬಹುದಾಗಿದೆ. ಪ್ರಿಂಟರ್ ಸಂಪರ್ಕವೂ ತ್ವರಿತವಾಗಿದೆ. ಅಲ್ಲದೆ, ವೀಡಿಯೋ, ಸಂಗೀತ, ಫೋಟೋ, ಹಂಚಿಕೆಯೂ ಸರಳ. ನಿಮ್ಮ ಪರ್ಸನಲ್ ಕಂಪ್ಯೂಟರನ್ನು ಟಿ.ವಿ. ನೇರಪ್ರಸಾರ, ರಿಕಾರ್ಡಿಂಗ್ ಹಾಗೂ ಇಂಟರ್ನೆಟ್ ಟಿವಿ ವೀಕ್ಷಣೆಗೆ ಬಳಸಬಹುದಾಗಿದೆ.

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2016 Microsoft Corporation. All rights reserved.