Skip Ribbon Commands
Skip to main content
ವಿಂಡೋಸ್ ಮತ್ತು ಆಫೀಸ್ಗಳಲ್ಲಿ ಕನ್ನಡ

ಡಾ. ಯು. ಬಿ. ಪವನಜ

Published on 15th June 2004

 

ಪ್ರಪಂಚಾದ್ಯಂತ ಬಹುಪಾಲು ಜನರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ಇನ್ನು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬಳಸುವುದು ಮೈಕ್ರೋಸಾಫ್ಟ್ನವರದೇ ಆದ ಆಫೀಸ್ ತಂತ್ರಾಂಶಗುಚ್ಛವನ್ನು. ಜನಸಾಮಾನ್ಯರಿಗೆ ಗಣಕಗಳಲ್ಲಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ವಿಂಡೋಸ್ ಮತ್ತು ಆಫೀಸ್ಗಳನ್ನು ಬಳಸಿ ಮಾಡಬಹುದು. ಈ ಕೆಲಸಗಳು ಯಾವುವು? ಅವುಗಳಿಗೆ ಜನರು ಬಳಸುವ ತಂತ್ರಾಂಶಗಳು (ಸಾಫ್ಟ್ವೇರ್) ಯಾವುವು? ಒಂದು ಗಣಕವನ್ನು ನಡೆಸುವ ಮೇಲುಸ್ತುವಾರಿಗೆ ವಿಂಡೋಸ್. ಪತ್ರ, ಪುಸ್ತಕ, ಲೇಖನ, ಇತ್ಯಾದಿಗಳ ಬೆರಳಚ್ಚು ಮತ್ತು ಪುಟವಿನ್ಯಾಸಕ್ಕೆ ವರ್ಡ್. ಹಣಕಾಸು ಮತ್ತು ಇತರೆ ಲೆಕ್ಕ ವ್ಯವಹಾರಗಳಿಗೆ ಎಕ್ಸೆಲ್. ದತ್ತಾಂಶಗಳ (ಡಾಟಾಬೇಸ್) ಸಂಗ್ರಹಣೆ ಮತ್ತು ನಿರ್ವಹಣೆಗೆ ಆಕ್ಸೆಸ್. ವಿ-ಅಂಚೆ (ಇಮೈಲ್) ಕಳುಹಿಸಲು ಮತ್ತು ಸ್ವೀಕರಿಸಲು ಔಟ್ಲುಕ್. ಇನ್ನೂ ಸ್ವಲ್ಪ ಹೆಚ್ಚು ಪರಿಣತರುಗಳಿಗೆ ಅಂತರಜಾಲ ತಾಣ (ವೆಬ್ಸೈಟ್) ನಿರ್ಮಾಣಕ್ಕೆ ಫ್ರಂಟ್ಪೇಜ್ ಮತ್ತು ಭಾಷಣ ಕೊಡಲು ಸ್ಲೈಡ್ಶೋ ಮಾಡಲು ಪವರ್ಪೋಯಿಂಟ್. ಈ ವರ್ಡ್, ಎಕ್ಸೆಲ್, ಆಕ್ಸೆಸ್, ಔಟ್ಲುಕ್, ಪವರ್ಪೋಯಿಂಟ್ ಮತ್ತು ಫ್ರಂಟ್ಪೇಜ್ ಒಟ್ಟು ಸೇರಿ ಆಫೀಸ್ ತಂತ್ರಾಂಶಗುಚ್ಛ ಆಗಿದೆ.

ಮೈಕ್ರೋಸಾಫ್ಟ್ನವರು ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ವಿಂಡೋಸ್ ಎಕ್ಸ್ಪಿ ಮತ್ತು ಆಫೀಸ್ ಎಕ್ಸ್ಪಿ ತಂತ್ರಾಂಶಗಳಲ್ಲಿ ಕನ್ನಡವನ್ನು ಹಾಸುಹೊಕ್ಕಾಗಿ ಅಳವಡಿಸಲಾಗಿದೆ ಎಂಬ ವಿಷಯ ಎಷ್ಟು ಜನರಿಗೆ ಗೊತ್ತಿದೆ? ಈ ತಂತ್ರಾಂಶಗಳನ್ನು ಉಪಯೋಗಿಸಿ ಇನ್ನಿತರೆ ಯಾವುದೇ ಬಾಹ್ಯ ಲಿಪಿ ತಂತ್ರಾಂಶಗಳ ನೆರವಿಲ್ಲದೆ ಕನ್ನಡವನ್ನು ಸಮಗ್ರವಾಗಿ ಬಳಸಬಹುದು. ಕನ್ನಡದ ಬಳಕೆಗೆ ಬೇಕಾದ ಸವಲತ್ತುಗಳಾದ ಕೀಲಿಮಣೆ ತಂತ್ರಾಂಶ, ಅಕ್ಷರವಿನ್ಯಾಸ (ಫಾಂಟ್), ಶಿಷ್ಟತೆಗೊಳಪಟ್ಟ ಮಾಹಿತಿ ಸಂಗ್ರಹ, ಕನ್ನಡ ಭಾಷೆಯ ಪ್ರಕಾರ ಅಕಾರಾದಿ ವಿಂಗಡಣೆ, ಪದಪರೀಕ್ಷೆ -ಇವುಗಳನ್ನೆಲ್ಲ ವಿಂಡೋಸ್ ಮತ್ತು ಆಫೀಸ್ ತಂತ್ರಾಂಶಗಳು ಒಳಗೊಂಡಿವೆ. ಆಫೀಸ್ ಎಕ್ಸ್ಪಿ ತಂತ್ರಾಂಶವು ಎರಡು ವರ್ಷಗಳ ವಿಂದೆ ವಿಂಡೋಸ್ ಎಕ್ಸ್ಪಿ ಜೊತೆ ಬಿಡುಗಡೆಗೊಂಡಿತ್ತು. ಆಗ ಅವುಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಕೆಲವು ದೋಷಗಳು ನುಸುಳಿದ್ದವು. ಈಗ ಬಂದಿರುವ ಆಫೀಸ್ ೨೦೦೩ರಲ್ಲಿ ಈ ದೋಷಗಳನ್ನು ಪರಿಹರಿಸಲಾಗಿದೆ.


ವಿಂಡೋಸ್ ಎಕ್ಸ್ಪಿಯಲ್ಲಿ ಕನ್ನಡವನ್ನು ಅಳವಡಿಸಲಾಗಿದೆ ಎಂಬುದು ಇದನ್ನು ಬಳಸುವ ಬಹುಪಾಲು ಜನರಿಗೇ ಗೊತ್ತಿಲ್ಲ. ಇದನ್ನು ಬಳಸದ ಹೆಚ್ಚಿನ ಮಂದಿಗಂತೂ ಈ ಬಗ್ಗೆ ಅಜ್ಞಾನ ಇದ್ದೇ ಇದೆ. “ವಿಂಡೋಸ್ ಎಕ್ಸ್ಪಿಯಲ್ಲಿ ಕನ್ನಡವಿದೆಯೇ? ನಾನು ಅದನ್ನೇ ಬಳಸುವುದು, ಆದರೆ ಅದರಲ್ಲಿ ಕನ್ನಡವಿರುವುದು ನನಗೆ ತಿಳಿದೇ ಇಲ್ಲ” ಎಂದು ಉದ್ಗರಿಸುವ ಹಲವು ಮಂದಿಯನ್ನು ನಾನು ಕಂಡಿದ್ದೇನೆ. ವಿಂಡೋಸ್ ಎಕ್ಸ್ಪಿಯಲ್ಲಿ ಕನ್ನಡದ ಸವಲತ್ತು ಇದ್ದರೂ ಅದನ್ನು ಪ್ರತ್ಯೇಕವಾಗಿ ಸಕ್ರಿಯಗೊಳಿಸಬೇಕಾಗುತ್ತದೆ. ಅಂದರೆ ವಿಂಡೋಸ್ ಎಕ್ಸ್ಪಿಯನ್ನು ಅನುಸ್ಥಾಪಿಸುವಾಗ (ಇನ್ಸ್ಟಾಲ್ ಮಾಡುವಾಗ) ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳನ್ನು ಅದು ಗಣಕಕ್ಕೆ ಸೇರಿಸುವುದಿಲ್ಲ. ಅವುಗಳನ್ನು ಹೇಗೆ ಸೇರಿಸುವುದು ಎಂಬುದನ್ನು ವಿವರವಾಗಿ ನೋಡೋಣ. ಈ ವಿವರಗಳನ್ನು ಟ್ಯುಟೋರಿಯಲ್ ಮಾದರಿಯಲ್ಲಿ ನೀಡಲಾಗಿದೆ.


ವಿಂಡೋಸ್ನ ಕಂಟ್ರೋಲ್ ಪಾನೆಲ್ ಅನ್ನು ತೆರೆಯಿರಿ (ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಮೂಡಿ ಬರುವ ಆದೇಶಗಳಲ್ಲಿ ಬಲಬದಿಯಲ್ಲಿ ಕಂಟ್ರೋಲ್ ಪಾನೆಲ್ಗೆ ಆದೇಶ ಇದೆ). ಇಲ್ಲಿ ಆದೇಶಗಳು ವಿಷಯಾಧಾರಿತವಾಗಿ ಹಲವು ವಿಭಾಗಗಳಲ್ಲಿ ಇವೆಯಾದಲ್ಲಿ ಎಡಗಡೆ ಕಾಣಸಿಗುವ ಸ್ವಿಚ್ ಟು ಕ್ಲಾಸಿಕ್ ವ್ಯೂ (Switch to Classic View) ಎಂಬ ಆದೇಶದ ಮೇಲೆ ಕ್ಲಿಕ್ ಮಾಡಿ. ಈಗ ಕಾಣಸಿಗುವ ರೀಜನಲ್ ಆಂಡ್ ಲಾಂಗ್ವೇಜ್ ಆಪ್ಶನ್ಸ್ (Regional and Language Options) ಎಂಬ ಆದೇಶದ ಮೇಲೆ ಕ್ಲಿಕ್ ಮಾಡಿ. ತದನಂತರ ಮೂಡಿಬಂದಿರುವ ಡೈಲಾಗ್ ಬಾಕ್ಸ್ನಲ್ಲಿ ಮೇಲ್ಗಡೆ ಇರುವ ಲಾಂಗ್ವೇಜಸ್ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ (ಚಿತ್ರ-೧). ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳನ್ನು ಸೇರಿಸುವ ಆಯ್ಕೆ ಇಲ್ಲಿದೆ. ಭಾರತೀಯ ಭಾಷೆಗಳನ್ನು ಸೇರಿಸಲು 'Install files for complex script and right-to-left languages (including Thai)' ಎಂಬ ಆಯ್ಕೆಯ ಮುಂದೆ ಚೆಕ್ ಮಾಡಬೇಕು. ಭಾರತೀಯ ಭಾಷೆಗಳನ್ನು ಸೇರಿಸಲು ಇಲ್ಲಿ ಕ್ಲಿಕ್ ಮಾಡಿ ಎಂದು ಎಲ್ಲೂ ಬರೆದಿಲ್ಲ. ಕಾಂಪ್ಲೆಕ್ಸ್ ಸ್ಕ್ರಿಪ್ಟ್ಸ್ ಎಂದರೆ ಅದರಲ್ಲಿ ಭಾರತೀಯ ಭಾಷೆಗಳೂ ಅಡಕವಾಗಿವೆ ಎಂದು ವೇದ್ಯವಾಗುವುದಿಲ್ಲ. ಈ ಕಾರಣದಿಂದ ಹೆಚ್ಚಿನ ಮಂದಿಗೆ ವಿಂಡೋಸ್ ಎಕ್ಸ್ಪಿಯನ್ನು ಬಳಸುತ್ತಿದ್ದರೂ ಅದರಲ್ಲಿ ಕನ್ನಡವನ್ನು ಬಳಸಬಹುದು ಎಂದು ಗೊತ್ತಿಲ್ಲ.


ಇಷ್ಟು ಮಾಡಿದರೆ ಗಣಕದಲ್ಲಿ ಕನ್ನಡ ಭಾಷೆಯನ್ನು ಬಳಸಲು ಬೇಕಾದ ಕೆಲವು ಮೂಲಭೂತ ಸೌಲಭ್ಯಗಳನ್ನು ಚಾಲನೆ ಮಾಡಿದಂತಾಗುತ್ತದೆ. ಯಾವುದೇ ಭಾಷೆಯನ್ನು ಗಣಕಕ್ಕೆ ಊಡಿಸಬೇಕಾದರೆ ಆ ಭಾಷೆಗೊಂದು ಕೀಲಿಮಣೆ ತಂತ್ರಾಂಶ ಬೇಕು. ಇಂಗ್ಲೀಶ್ ಭಾಷೆಗೂ ಈ ಮಾತು ಅನ್ವುಸುತ್ತದೆ. ಆದರೆ ಗಣಕದಲ್ಲಿ ಇಂಗ್ಲೀಶ್ ಭಾಷೆಯ ಕೀಲಿಮಣೆ ತಂತ್ರಾಂಶವನ್ನು ಪ್ರತ್ಯೇಕವಾಗಿ ಚಾಲೂ ಮಾಡಬೇಕಾಗಿಲ್ಲ. ಕನ್ನಡದ ಕೀಲಿಮಣೆಯನ್ನು ಅನುಸ್ಥಾಪಿಸಿವುದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ. ಕಂಟ್ರೋಲ್ ಪಾನೆಲ್ನ್ನು ತೆರೆದು ರೀಜನಲ್ ಆಂಡ್ ಲಾಂಗ್ವೇಜ್ ಆಪ್ಶನ್ಸ್ ಎಂಬ ಆದೇಶವನ್ನು ಮತ್ತೊಮ್ಮೆ ಚಾಲನೆ ಮಾಡಿ. ಈಗ ಮೂಡಿಬಂದಿರುವ ಡೈಲಾಗ್ ಬಾಕ್ಸ್ನಲ್ಲಿ ಮೇಲ್ಗಡೆ ಇರುವ ಲಾಂಗ್ವೇಜಸ್ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಈಗ ಕಾಣಸಿಗುವ “Details” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಈಗಾಗಲೆ ಅಳವಡಿಸಿರುವ ಕೀಲಿಮಣೆ ವಿನ್ಯಾಸಗಳನ್ನು ಇಲ್ಲಿ ಕಾಣಬಹುದು. ಕನ್ನಡವನ್ನು ಸೇರಿಸಲು ಬಲಗಡೆ ಇರುವ “Add” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ


ಇಲ್ಲಿ ಕನ್ನಡವನ್ನು ಆಯ್ಕೆ ಮಾಡಿರಿ

ಹಲವು ಸ್ಥಳಗಳಲ್ಲಿ ಓಕೆ ಎಂದು ಕ್ಲಿಕ್ ಮಾಡಿ ಹೊರ ಬಂದಾಗ ನಿಮ್ಮ ಗಣಕದಲ್ಲಿ ಕನ್ನಡವನ್ನು ಊಡಿಸಲು ಬೇಕಾದ ಎಲ್ಲ ಸೌಲಭ್ಯಗಳು ಅಡಕವಾಗಿರುತ್ತವೆ.


ಕಂಟ್ರೋಲ್ ಪಾನೆಲ್ನಲ್ಲಿರುವ ರೀಜನಲ್ ಆಂಡ್ ಲಾಂಗ್ವೇಜ್ ಆಪ್ಶನ್ಸ್ನ್ನು ಮತ್ತೊಮ್ಮೆ ಬಳಸಿ. ಈಗ ಮೂಡಿಬಂದಿರುವ ಡೈಲಾಗ್ ಬಾಕ್ಸ್ನಲ್ಲಿ ಮೇಲ್ಗಡೆ ಇರುವ ರೀಜನಲ್ ಆಪ್ಶನ್ಸ್ (Regional Options) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಪ್ರಪಂಚದ ಹಲವು ಭಾಷೆಗಳಲ್ಲಿ ನಮಗೆ ಬೇಕಾದುದನ್ನು ನಮ್ಮ ಗಣಕದ ಭಾಷೆಯಾಗಿ ಆಯ್ಕೆ ಮಾಡುವ ಸೌಲಭ್ಯ ಇಲ್ಲಿದೆ. ಕನ್ನಡವೂ ಈ ಭಾಷೆಗಳ ಪಟ್ಟಿಯಲ್ಲಿ ಸೇರಿದೆ. ಇಲ್ಲಿ ಕನ್ನಡವನ್ನು ಆಯ್ಕೆ ಮಾಡುವ


ಮೂಲಕ ಗಣಕದ ಕ್ಯಾಲೆಂಡರ್, ತಾರೀಕು ಇತ್ಯಾದಿಗಳನ್ನು ಕನ್ನಡದಲ್ಲಿ ಓದಬಹುದು


ಆಫೀಸ್ ತಂತ್ರಾಂಶದಲ್ಲಿ ಕನ್ನಡದ ಪದಪರೀಕ್ಷೆಯ ಸವಲತ್ತನ್ನು ನೀಡಲಾಗಿದೆ. ಎಂದರೆ ಬೆರಳಚ್ಚಿನ ದೋಷಗಳನ್ನು ಕೂಡಲೆ ಪತ್ತೆ ಹಚ್ಚಿ ಅವನ್ನು ಸರಿಪಡಿಸಿಕೊಳ್ಳಬಹುದು


ಕನ್ನಡ ಭಾಷೆಗನುಗುಣವಾಗಿ ಅಕಾರಾದಿ ವರ್ಗೀಕರಣ ಕೂಡ ಮಾಡಬಹುದು


ಈ ಎಲ್ಲ ಸವಲತ್ತುಗಳು ಪ್ರಪಂಚದ ಎಲ್ಲ ಖ್ಯಾತ ತಂತ್ರಾಂಶ ತಯಾರಕರು ಹಾಗೂ ದೇಶಗಳು ಒಪ್ಪಿಕೊಂಡಿರುವ ಯುನಿಕೋಡ್ ಶಿಷ್ಟತೆಗೆ ಅನುಗುಣವಾಗಿವೆ. ಇದರಿಂದಾಗಿ ನೀವು ಒಮ್ಮೆ ಬೆರಳಚ್ಚು ಮಾಡಿದ ಮಾಹಿತಿ ಎಂದೆಂದಿಗೂ ಅಪ್ರಸ್ತುತವಾಗುವ ಭಯವಿಲ್ಲ. ಯುನಿಕೋಡ್ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಿಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ನುಡಿ, ಬರಹ ಇತ್ಯಾದಿ ಯಾವುದೇ ಬಾಹ್ಯ ಲಿಪಿ ತಂತ್ರಾಂಶಗಳ ನೆರವಿಲ್ಲದೆ ಎಂದೆಂದಿಗೂ ಅಪ್ರಸ್ತುವಾಗದ ರೀತಿಯಲ್ಲಿ ಕನ್ನಡದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

Courtesy: Prajavani
May 19, 2004

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.