Skip Ribbon Commands
Skip to main content
    

 

 

ಮೈಕ್ರೋಸಾಫ್ಟ್ ವರ್ಡ್‌ 2003 ರಲ್ಲಿ ಕೋಷ್ಟಕಗಳು

ಮೈಕ್ರೋಸಾಫ್ಟ್‌ ಕಂಪೆನಿಯ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ಇದರಲ್ಲಿ ಸೇರಿಕೊಂಡಿರುವ ವರ್ಡ್‌ 2003ನ್ನು ಬಳಸಿ ಲೇಖನಗಳನ್ನು ಸಿದ್ಧಮಾಡಬಹದು. ಅಷ್ಟು ಮಾತ್ರವಲ್ಲ, ಪುಸ್ತಕಗಳನ್ನೂ ಸಿದ್ಧಮಾಡಬಹುದು. ಅದಕ್ಕೆ ಪೂರಕವಾದ ಹಲವು ಸೌಲಭ್ಯಗಳು ಈ ತಂತ್ರಾಂಶದಲ್ಲಿ ಲಭ್ಯವಿವೆ. ಪದಪರೀಕ್ಷೆ, ಹುಡುಕು-ಬದಲಿಸು, ಅಕ್ಷರ ಸ್ವರೂಪಣ ಮತ್ತು ಪುಟ ವಿನ್ಯಾಸ, ಕೋಷ್ಟಕಗಳ ಅಳವಡಿಕೆ ಇತ್ಯಾದಿಗಳ ಜೊತೆ ಚಿತ್ರಗಳ ಅಳವಡಿಕೆ –ಇವು ಕೆಲವು ಸೌಲಭ್ಯಗಳು. ಉಪಯುಕ್ತ ಸವಲತ್ತುಗಳ ಪಟ್ಟಿ ಇನ್ನೂ ದೊಡ್ಡದಿದೆ. ವರ್ಡ್‌ 2003 ರಲ್ಲಿ ಕೋಷ್ಟಕಗಳ ಅಳವಡಿಕೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಕೋಷ್ಟಕಗಳನ್ನು ಎರಡು ವಿಧಾನಗಳಲ್ಲಿ ತಯಾರಿಸಬಹುದು. ಅವುಗಳನ್ನು ಅಡ್ಡ ನೀಟ ಗೆರೆಗಳನ್ನು ಎಳೆದು ತಯಾರಿಸುವುದು ಒಂದು ವಿಧಾನ. ಇನ್ನೊಂದು ವಿಧಾನದಲ್ಲಿ Table ಮೆನುವನ್ನು ಬಳಸುವುದು. ವರ್ಡ್ 2003 ರ Table ಮೆನುವಿನಲ್ಲಿರುವ Insert => Table ಆದೇಶವನ್ನು ಬಳಸಿ ಕೋಷ್ಟಕಗಳನ್ನು ಸೇರಿಸಬಹುದು. ಇದನ್ನು ಆಯ್ಕೆ ಮಾಡಿದಾಗ ಒಂದು ಸಂವಾದಚೌಕ ಮೂಡಿಬರುತ್ತದೆ. ಅದರಲ್ಲಿ ನಮಗೆ ಎಷ್ಟು ಅಡ್ಡ ಸಾಲುಗಳು ಮತ್ತು ಕಾಲಂಗಳು ಬೇಕು ಎಂಬುದನ್ನು ನಮೂದಿಸಬಹುದು.


ಈ ಸಂವಾದಚೌಕದಲ್ಲಿ Autofit bevahior ಎಂಬಲ್ಲಿ ಕಾಲಂಗಳು ಯಾವ ರೀತಿಯಲ್ಲಿರಬೇಕು ಎಂಬುದನ್ನು ಆಯ್ಕೆ ಮಾಡಬಹುದು. ನಿರ್ದಿಷ್ಟ ಅಗಲ, ಕಾಲಂನಲ್ಲಿರುವ ಮಾಹಿತಿಗೆ ಸರಿಯಾಗಿ ಹೊಂದಿಕೊಳ್ಳುವುದು ಅಥವಾ ಪುಟದ ಅಗಲಕ್ಕೆ ಸರಿಯಾಗಿ ಹೊಂದಿಕೊಳ್ಳುವುದು –ಈ ವಿಧಾನಗಳಲ್ಲಿ ಯಾವ ರೀತಿ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಕೋಷ್ಟಕದ ವಿನ್ಯಾಸವನ್ನು ಹಲವು ಪೂರ್ವನಿರ್ಧಾರಿತ ವಿನ್ಯಾಸಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ AutoFormat ಎಂಬ ಬಟನನ್ನು ಕ್ಲಿಕ್ ಮಾಡಬೇಕು. ಹಾಗೆ ಮಾಡಿದಾಗ ಮೂಡಿಬರುವ ಹಲವು ವಿನ್ಆಯಸಗಳಲ್ಲಿ ನಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.


ಒಂದು ಕೋಷ್ಟಕದ ಉದಾಹರಣೆ ಇಲ್ಲಿದೆ. ಈಗಾಗಲೆ ತೋರಿಸಿದ ಪೂರ್ವನಿರ್ಧಾರಿತ ವಿನ್ಯಾಸದಲ್ಲಿ ಈ ಕೋಷ್ಟಕವನ್ನು ತಯಾರಿಸಲಾಗಿದೆ.


ಇಲ್ಲೊಂದು ಪ್ರಮುಖ ವಿಷಯವನ್ನು ಗಮನಿಸಬಹುದು. ಈ ಕೋಷ್ಟಕದ ಮೊದಲ ಕಾಲಂನಲ್ಲಿರುವ ಪಠ್ಯವನ್ನು ಎಡಕ್ಕೆ ಹೊಂದಿಸಲಾಗಿದೆ. ಆದರೆ ನಂತರದ ಮೂರು ಕಾಲಂಗಳಲ್ಲಿ ತೋರಿಸಿರುವ ಸಂಖ್ಯೆಗಳನ್ನು ಬಲಕ್ಕೆ ಹೊಂದಿಸಲಾಗಿದೆ. ಈ ಎಲ್ಲ ಸವಲತ್ತುಗಳು ಕೋಷ್ಟಕದಲ್ಲಿ ಅಡಕವಾಗಿವೆ.

Table ಮೆನುವಿನಲ್ಲಿರುವ Draw Table ಎಂಬ ಆಯ್ಕೆಯನ್ನು ಬಳಸಿಯೂ ಕೋಷ್ಟಕಗಳನ್ನು ತಯಾರಿಸಬಹುದು. ಈ ವಿಧಾನದಲ್ಲಿ ಗ್ರಾಫಿಕ್ಸ್ ತಂತ್ರಾಂಶಗಳಲ್ಲಿ ಮಾಡುವಂತೆ ಅಡ್ಡ ಮತ್ತು ನೀಟ ಗೆರೆಗಳನ್ನು ನಾವೇ ಮೌಸ್ ಬಳಸಿ ಎಳೆದು ಕೋಷ್ಟಕ ತಯಾರಿಸಬೇಕು. ಪರಿಣತರು ಈವಿಧಾನವನ್ನು ಹೆಚ್ಚು ಇಷ್ಟಪಡಬಹುದು. ಇದರಲ್ಲಿ ಎಳೆದ ಗೆರೆಯನ್ನು ಅಳಿಸುವ ಸವಲತ್ತೂ ಇದೆ. ಇದಕ್ಕಾಗಿ ನೀಡಿರುವ ಎರೇಸರ್ ಅನ್ನು ಬಳಸಿ ಕೆಲವು ಗೆರೆಗಳನ್ನು ಅಳಿಸಿ ಕಾಲಂಗಳನ್ನು ಜೋಡಿಸಬಹುದು.

Table ಮೆನುವಿನಲ್ಲಿರುವ ಇತರೆ ಆದೇಶಗಳು ಇನ್ನೂ ಹಲವು ಸೌಲಭ್ಯಗಳಿಂದ ಕೂಡಿದೆ. ಅವುಗಳನ್ನು ಬಳಸಿ ಕೋಷ್ಟಕದಲ್ಲಿರುವ ಸಾಲು ಅಥವಾ ಕಾಲಂಗಳನ್ನು ಅಳಿಸಬಹುದು, ಕೋಷ್ಟಕದ ವಿನ್ಯಾಸವನ್ನು ಬದಲಿಸಬಹುದು, ಕೋಷ್ಟಕದಲ್ಲಿರುವ ಮಾಹಿತಿಯನ್ನು ಆರೋಹಣ ಅಥವಾ ಅವರೋಹಣ ಕ್ರಮದಲ್ಲಿ ವಿಂಗಡಿಸಬಹುದು, ಕೋಷ್ಟಕವನ್ನು ಪಠ್ಯವಾಗಿ ಬದಲಿಸಬಹುದು –ಇತ್ಯಾದಿ ಹಲವು ಸೌಕರ್ಯಗಳಿವೆ.

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2014 Microsoft Corporation. All rights reserved.